ಕಲೆ ಮತ್ತು ಜೀವನ

ಪ್ರಾಚೀನ ಗ್ರೀಕರಿಗೂ ರೋಮನರಿಗೂ ಜೀವನವೆಂದರೆ ಮನುಷ್ಯಜೀವನವೆಂದೇ ಅರ್ಥ. ಪಶು, ಪಕ್ಷಿ, ಮುಂತಾದ ಮಾನವೇತರ ಜೀವಿಗಳ ಪ್ರಪಂಚವನ್ನಾಗಲಿ ಭೌತಪ್ರಕೃತಿಯ ಪ್ರಪಂಚವನ್ನಾಗಲಿ ಅವರು ಲಕ್ಷ್ಯಕ್ಕೆ ಅಷ್ಟಾಗಿ ತೆಗೆದುಕೊಳ್ಳಲಿಲ್ಲ. ಈಗ ಅವಕ್ಕೂ ಚೈತನ್ಯ ಅಸ್ತಿತ್ವ, ಗುಣಲಕ್ಷಣ, ಇರುವುವೆಂದು ನಂಬಿಕೆ. ಜೀವನವೆಂಬ ತತ್ತ್ವ ವಿಶಾಲ ವ್ಯಾಪ್ತಿಯುಳ್ಳದ್ದು. ಕಲಾವಿದರು ಈ ಮೂರರಲ್ಲಿ ಯಾವದರಿಂದ ಬೇಕಾದರೂ ವಿಷಯ ಸಾಮಗ್ರಿಯನ್ನು ಪಡೆಯಬಹುದು. ಹೀಗಿದ್ದರೂ ಮನುಷ್ಯ ಜೀವನಕ್ಕೆ ಮುಖ್ಯ ಸ್ಥಾನವನ್ನು ಕೊಟ್ಟು ಮಿಕ್ಕ ಎರಡನ್ನು ಹಿನ್ನಲೆಯಾಗಿಯೋ ಸಹಾಯಕವಾಗಿಯೋ ಬಳಸಿಕೊಳ್ಳುವುದೇ ಹೆಚ್ಚು.

ಕಲೆಯ ಚಟುವಟಿಕೆ ಬೇರೆ, ಜೀವನದ ವ್ಯಾಪಾರ ಬೇರೆ; ಎರಡಕ್ಕೂ ಮಧ್ಯೆ ದಾಟಲಾಗದ ಭಾರಿ ಕಮರಿ ಉಂಟು ಎಂಬ ಭಾವನೆ ಕೆಲವರಲ್ಲಾದರೂ ಮನೆಮಾಡಿದೆ. ಉದ್ದೇಶ, ಕಾರ್ಯ, ಫಲ ಎಲ್ಲದರಲ್ಲೂ ಅವೆರಡಕ್ಕೆ ತುಂಬ ವ್ಯತ್ಯಾಸವಿದೆಯಾದ್ದರಿಂದ ಅವುಗಳ ಪರಸ್ಪರ ಸಂಬಂಧವನ್ನು ಚರ್ಚಿಸಿ ಪ್ರಯೋಜನವಿಲ್ಲವೆಂಬ ಅನುಮೇಯ ಈ ಭಾವನೆಯಿಂದ ಉತ್ಪನ್ನವಾಗುತ್ತದೆ. ತೀರ ವಿರುದ್ಧ ಪದಾರ್ಥಗಳನ್ನು ಒಂದರ ಜೊತೆ ಇನ್ನೊಂದನ್ನು ಇಡಲು ಆಗದು. ಇಂಥ ವಿಪರೀತ ಅಭಿಪ್ರಾಯಕ್ಕೆ ಪ್ರತಿಯಾಗಿ ಕಲೆಗೂ ಜೀವನಕ್ಕೂ ನಿಕಟ ಬಾಂಧ್ಯವ್ಯ ಉಂಟೆಂಬ ಅಭಿಪ್ರಾಯ ಉಳ್ಳವರೇ ಹೆಚ್ಚು. ಆ ಅಭಿಪ್ರಾಯದಲ್ಲೇ ಅಧಿಕ ಸತ್ಯಾಂಶವಿರುವಂತಿದೆ. ಜೀವನದಿಂದ ದೂರಹೋಗಿ ಜೀವನವನ್ನು ಮರೆತು ಮತ್ಯಾವದನ್ನು ಮನುಷ್ಯ ಧ್ಯಾನಿಸಬಹುದು, ಆಲೋಚಿಸಬಹುದು, ಚಿತ್ರಿಸಬಹುದು ? ಜೀವನದಿಂದ ಆಚೆ ಶೂನ್ಯ. ಶೂನ್ಯವೆಂದರೆ ಎನೂ ಇಲ್ಲದಿಕೆ. 

ಜೀವನದ ಎಣಿಸಲಾಗದ ಅಂಶಗಳಲ್ಲಿ ತಮ್ಮ ತಮ್ಮ ಮನಸ್ಸಿಗೆ ಹಿಡಿಸಿದುದನ್ನು ಕಲಾವಿದರು ಆರಿಸಿಕೊಂಡು ಅದಕ್ಕೆ ತಮ್ಮ ತಮ್ಮ ವಾಹಕಗಳ ಮೂಲಕ ರೂಪು ಕೊಡುತ್ತಾರೆ. ಹಾಗೆ ಮಾಡುವಾಗ ಅವರು ಅನುಸರಿಸಬಹುದಾದ ಕ್ರಮಗಳು ಸ್ಥೂಲವಾಗಿ ಮೂರು. ಇದ್ದುದನ್ನು ಹೆಚ್ಚಿಸದೆ ಕಡಿಮೆಮಾಡದೆ ಇದ್ದ ಹಾಗೆಯೆ ನಿರೂಪಿಸುವ ವಿಧಾನ ಮೊದಲನೆಯದು. ಆದರೆ ಕಲೆಯ ಇತಿಹಾಸದಲ್ಲಿ ಆ ಮಾರ್ಗ ಸೂಕ್ತವೂ ಅನುಷ್ಠಾನಯೋಗ್ಯವೂ ಮೇಲ್ಮಟ್ಟಕ್ಕೆ ಏರಬಲ್ಲದ್ದೂ ಆಗಿದೆ ಎಂದು ಕಂಡುಬಂದದ್ದು ಈಚೀಚೆಗೆ. ವಾಸ್ತವಿಕತೆ ಕಲೆಯ ಸರಹದ್ದಿನೊಳಕ್ಕೆ ಜೋರಾಗಿ ಪ್ರವೇಶಮಾಡಿದ್ದು 19ನೆಯ ಶತಮಾನದಲ್ಲಿ.

ಎರಡನೆಯ ಕ್ರಮವೆಂದರೆ ಹಿಂದಿನಿಂದಲೂ ರೂಢಿಗೆ ಬಂದಿದ್ದ ಕ್ರಮ ಜೀವನವನ್ನು ಕಲಾವಿದ ಒಂದಲ್ಲ ಒಂದು ಬಗೆಯಲ್ಲಿ ಅಷ್ಟೋ ಇಷ್ಟೋ ಪ್ರಮಾಣದಲ್ಲಿ ಅತಿಶಯಿಸುವಿಕೆ. ಅದಕ್ಕೆ ಜೀವನವನ್ನು ಕುರಿತ ಒಂದು ತಾತ್ತ್ವಿಕ ನಂಬಿಕೆ ಆಧಾರ. ವ್ಯಕ್ತಿಯ ಬಹಿರಂಗ ಚಲನವಲನಕ್ಕಿಂತ ಅವನ ಅಂತರಂಗ ಜೀವನ ಅವನ ನೈಜ ವ್ಯಕ್ತಿತ್ವವನ್ನು ಹೊರಗೆಡಹುತ್ತದೆ. ವ್ಯಕ್ತಿಯ ಒಳಗಡೆ ಅವನ ಪ್ರಕೃತಿ ಸ್ವಭಾವ ನಡೆಯುತ್ತಿರುತ್ತದೆ. ಅದರಲ್ಲಿ ವ್ಯಕ್ತಿಯ ಸಾಮಾನ್ಯ ಲಕ್ಷಣದಂತೆ ವಿಶಿಷ್ಟ ಲಕ್ಷಣವೂ ಉಂಟು. ಕಲಾವಿದ ತನ್ನ ಒಳದೃಷ್ಟಿಯನ್ನು ಹರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಚೆನ್ನಾಗಿ ಗ್ರಹಿಸಿ ಕಲ್ಪನೆಯನ್ನು ಭಾವಿಸಿಕೊಂಡು ಅದನ್ನು ಹೊರತರುತ್ತಾನೆ. ಇದೇ ಅತಿಶಯಗೊಳಿಸಿಕೆ ಅಥವಾ ಆದರ್ಶೀಕರಣ. ವ್ಯಕ್ತಿಯಲ್ಲಿ ಇದ್ದೇ ಇರುವ ಕೊರೆ ಕೋಚು ಎಲ್ಲವನ್ನೂ ಅಳಿಸಿಬಿಟ್ಟು ಲೋಪದೋಷಗಳನ್ನು ಮರೆಮಾಡಿ ಗುಣಗಳನ್ನು ಹೆಚ್ಚಿಸಿ ಅವನ ಚಾರಿತ್ರ್ಯವನ್ನು ಉಲ್ಲೇಖಿಸಿರುವುದೂ ಉಂಟು. ಪಟ್ಟಣಗಳನ್ನು ಸುಟ್ಟು ಸಾಮ್ರಾಜ್ಯಗಳನ್ನೇ ಧ್ವಂಸಮಾಡಿದ ಜಗಜ್ಜೇತರಾದ ಶೂರರು ನಿಜಕ್ಕೂ ಉಂಟು. ಹೋಮರನ ಅಕಿಲೀಸ್, ಏಜಾಕ್ಸ್, ಹೆಕ್ಟಾರ್-ಮೊದಲಾದ ಪೌರಾಣಿಕ ಮಹಾಪುರುಷರು ಬದುಕಿಬಾಳಿದ ಆ ವೀರಾಗ್ರಣಿಗಳಿಗಿಂತ ಅಧಿಕ ತೇಜಸ್ಸಿನವರು. ಮಾನವಸಾಹಸ ಎಷ್ಟು ದೂರ ಹೋಗಬಹುದೋ ಅಷ್ಟು ದೂರ ಹೋಗಿರುವುದನ್ನು ಕವಿಗಳು ನಿರೂಪಿಸುತ್ತಾರೆ, ಶಿಲ್ಪಿಗಳು ಕೆತ್ತಿ ತೋರಿಸುತ್ತಾರೆ, ಚಿತ್ರಕಾರರು ಚಿತ್ರಿಸುತ್ತಾರೆ. ಅಕಿಲೀಸನಂಥ ವೀರಮಾನವ ಯಥಾರ್ಥವಾಗಿ ಇರಲಾರ. ಆದರೂ ಇರಬಹುದು. ಇದೇ ಜೀವನದ ವಾಸ್ತವ ಸತ್ಯಕ್ಕೂ ಕಲೆಯ ವಿಭಾವನಾ ಸತ್ಯಕ್ಕೂ ಇರುವ ಸಾಮ್ಯ, ವೈಷಮ್ಯ.

ಮೂರನೆಯ ಕ್ರಮವೆಂದರೆ ಜೀವನವನ್ನು ಇದಕ್ಕಿಂತ ಕೀಳಾಗಿಸಿ ಹೀನಾಯಿಸಿ ತೋರುವುದು. ವಾಸ್ತವತೆ, ಸ್ವಭಾವತೆ ಎಂಬ ತತ್ತ್ವಗಳ ಹೆಸರಿನಲ್ಲಿ ಈ ವಿಧದ ಅಸಹ್ಯಾತಿರೇಕ ಆಗಬಹುದು, ಆಗಿದೆ. ಕಲಾಕೃತಿ ಅಚ್ಚುಕಟ್ಟಾಗಿ ಅಂದಚೆಂದದಿಂದ ಸಂತಸಗೊಳಿಸಬೇಕು ಎಂಬ ವಿಧಿಯನ್ನು ನೇಮವಾಗಿಟ್ಟುಕೊಂಡರೆ ಅಸಹ್ಯಾತಿರೇಕ ಕುರೂಪವಾಗುತ್ತದೆ. ಆದರೂ ಕುರೂಪದ ವಿಷಯವಾಗಿ ಒಂದು ವಿಚಿತ್ರ ಸಂಗತಿಯುಂಟು. ಲಾವಣ್ಯವನ್ನು ವಾಸ್ತವತೆಗಿಂತ ಅತಿಶಯಗೊಳಿಸುವಂತೆ ಕುರೂಪವನ್ನೂ ಅತಿಶಯಗೊಳಿಸಬಹುದು. ಹಾಗೆ ಮಾಡಿದಾಗ ಕಲಾವಿದನ ಮಾಂತ್ರಿಕತೆಯಿಂದಲೋ ಏನೋ ಅದೇ ಒಂದು ಬಗೆಯ ಸುರೂಪವಾಗುತ್ತದೆ. ಕನಕದಾಸ ಕರ್ಕೋಟಕ ಕಚ್ಚಿದ ನಳನನ್ನು ಬಣ್ಣಿಸಿರುವ ರೀತಿ, ವಿಕ್ಟರ್ ಹ್ಯೂಗೋ ಒಂದು ಭವ್ಯ ಚರ್ಚಿನ ಸೇವಕ ಪ್ರಸಿದ್ಧ ಗೂನನನ್ನು ಚಿತ್ರಿಸಿರುವ ರೀತಿ ಇದಕ್ಕೆ ಉದಾಹರಣೆ. ಎರಡರಿಂದಲೂ ನಮಗೆ ದೊರಕುವ ಕಾವ್ಯಾಹ್ಲಾದ ಮಿಗಿಲು. ಕಲೆಯ ಸ್ವರೂಪ, ಸ್ವಧರ್ಮ, ಸ್ವಭಾವಗಳನ್ನು ವಿಚಾರಿಸುವಾಗ ಸೌಂದರ್ಯವೆಂಬ ಶಬ್ದವನ್ನು ಎಷ್ಟು ಕಡಿಮೆಯಾಗಿ ಬಳಸಿಕೊಂಡರೆ ಅಷ್ಟು ಕ್ಷೇಮ. ಏತಕ್ಕೆಂದರೆ ಆ ಶಬ್ದಕ್ಕೆ ಮನವೊಪ್ಪಿಸುವ ರೀತಿಯಲ್ಲಿ ಖಚಿತಾರ್ಥವನ್ನು ಯಾರೂ ಕೊಟ್ಟಿಲ್ಲ, ಪ್ರಾಯಶಃ ಕೊಡಲಾರರು.

ಕಲೆ ಪದಾರ್ಥತಿಷ್ಠವೋ ಭಾವ ಭಾವನಾತಿಷ್ಠವೋ ಎಂಬ ಜಿಜ್ಞಾಸೆ ಬಹುವಾಗಿ ನಡೆದಿದೆ. ಜೀವನ ಕಲೆಗಾರನ ಪ್ರಚೋದನೆಗಾಗಿ ಮುಂದಿಡುವ ಪದಾರ್ಥವೂ ಬೇಕು; ಕಲೆಗಾರನ ಪ್ರತಿಕ್ರಿಯೆಯಾದ ಭಾವ, ಭಾವನೆ ಮುಂತಾದುವೂ ಬೇಕು. ಒಂದು ಇದ್ದು ಇನ್ನೊಂದು ಇಲ್ಲದಿದ್ದರೆ ಕಲಾಕೃತಿ ಜನಿಸುವುದು ಅಶಕ್ಯ. ಬಾಹ್ಯ ವಸ್ತುಗಳು, ಜೀವನದ ಅಂಶಗಳು-ಎರಡೂ ಅಗತ್ಯ. ಕಲೆಗಾರನೆಂಬ ವ್ಯಕ್ತಿಯೂ ಅವನ ಆಂತರ್ಯದ ತುಡಿತ ಮಿಡಿತಗಳೂ ಜೀವನದ ಅಂಶಗಳು. ಆದ್ದರಿಂದ ಜೀವನವನ್ನು ಬಿಟ್ಟು ಕಲೆ ಎಂಬುದಿಲ್ಲ.

ಚರಿತ್ರೆ, ತತ್ತ್ವಶಾಸ್ತ್ರ, ವಿಜ್ಞಾನ, ಲಲಿತಕಲೆ ಎಲ್ಲವೂ ಜೀವನಕ್ಕೆ ಬಲು ಹತ್ತಿರದ ಸಂಬಂಧವನ್ನು ಉಳ್ಳವು. ಜೀವನದ ಪ್ರಸಂಗಗಳ ನಿಜವರದಿಯೇ ಚರಿತ್ರೆ. ಜೀವನದ ಆಕಾಂಕ್ಷೆ, ಅರ್ಥ, ಸಾರ್ಥಕ್ಯಗಳನ್ನು ಪರಿಶೀಲಿಸಿ ಸಿದ್ಧಾಂತಗಳನ್ನು ಹೇಳುವುದೇ ತತ್ತ್ವಶಾಸ್ತ್ರ. ವಸ್ತುಗಳು ಹೇಗೆ ರಚಿತವಾಗಿವೆ, ಹೇಗೆ ಆಕೃತಿವಿಕಾರ ಹೊಂದುತ್ತವೆ-ಮುಂತಾದ ವಿಚಾರಗಳನ್ನು ಯಂತ್ರಗಳ ಮೂಲಕವೂ ಗಾಢ ಚಿಂತನೆಯ ಮೂಲಕವೂ ಪರೀಕ್ಷಿಸಿ ನಿರ್ಣಯಗಳನ್ನು ತಿಳಿಯಹೇಳುವುದೇ ವಿಜ್ಞಾನ. ಇವು ಮೂರಕ್ಕೂ ಬುದ್ಧಿ ಶಕ್ತಿಯೇ ಪ್ರಮಾಣ, ಬುದ್ಧಿಶಕ್ತಿಗೇ ಇವುಗಳ ಸಂಬೋಧನೆ, ಕಲೆಯಾದರೋ ಮನುಷ್ಯನ ಮನಸ್ಸು, ಚಿತ್ರ, ಹೃದಯ, ಆತ್ಮ ಎಲ್ಲವನ್ನೂ ಒಳಗೊಂಡು ಪೂರ್ತಿ ಮಾನವತೆಯ ನಡೆವಳಿಕೆಯ ಅನುಭವವನ್ನು ತಂದುಕೊಡುತ್ತದೆ. ಜೀವನದ ಸಮಗ್ರ ಪರಿಚಯ ನಮಗೆ ದೊರಕುವುದು ಕಲೆಯಲ್ಲೇ.

 

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ